ಪೆರಿವಿಂಕಲ್ -
ಉದರಪಾದಿ ವರ್ಗದ ಪ್ರೋಸೋಬ್ರ್ಯಾಂಕಿಯ ಗಣದ ಲೆಟೊರೈನಿಡೀ ಕುಟುಂಬಕ್ಕೆ ಸೇರಿದ ಮೃದ್ವಂಗಿ. ಲಿಟೊರೈನ ಇದರ ವೈಜ್ಞಾನಿಕ ಹೆಸರು. ಇದರಲ್ಲಿ ಸುಮಾರು 80 ಪ್ರಭೇದಗಳುಂಟು. ಇವುಗಳ ಪೈಕಿ ಅತ್ಯಂತ ಮುಖ್ಯವಾದ್ದು ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ 430 ಉತ್ತರ ಅಕ್ಷಾಂಶದಿಂದ ಮೇಲಿನ ವಲಯದಲ್ಲಿ ಸಿಕ್ಕುವ ಲಿಟೊರಿಯ. ಇದರ ಉದ್ದ ಸುಮಾರು 2.5 ಸೆಂ.ಮೀ. ಕಿವಿರುಗಳ ಎಳೆಗಳು ಚರ್ಮದ ಹೊರಮಡಿಕೆಯ ಅವಕಾಶದುದ್ದ ಚಾಚಿಕೊಂಡಿರುವುದೂ ಹೊರಪದರ ರಕ್ತನಾಳಗಳಂತೆ ಕವಲೊಡೆದು ಫುಪ್ಪುಸವಾಗಿ ಮಾರ್ಪಟ್ಟಿರುವುದೂ ಈ ಪ್ರಾಣಿಗಳ ವೈಶಿಷ್ಟ್ಯ.

	ಪೆರಿವಿಂಕಲುಗಳು ಮಿಶ್ರಾಹಾರಿ. ಇವು ಸಮುದ್ರದಲ್ಲಿ ಸಿಗುವ ಪಾಚಿ, ಸಣ್ಣ ಮೃದ್ವಂಗಿಗಳು ಮತ್ತು ವಲ್ಕವಂತ ಪ್ರಾಣಿಗಳನ್ನು ತಿಂದು ಜೀವಿಸುತ್ತವೆ. ಇವು ಮೊಟ್ಟೆಗಳನ್ನು ಒಂಟಿಯಾಗಿ ಇಲ್ಲವೇ ಗುಂಪು ಗುಂಪಾಗಿ ಇಡುತ್ತವೆ. ಲಿಟೊರೈನ ರೂಡಿಸ್ ಮತ್ತು ಲಿಟೊರೈನ ಸೆರಿಟಾಯ್ಡಿಸ್ ಎಂಬುವು ಮಾತ್ರ ಮೊಟ್ಟೆಗಳನ್ನಿಡದೆ ಮರಿಯನ್ನು ಈಯುತ್ತವೆ. ಆದ್ದರಿಂದ ಇವುಗಳಲ್ಲಿ ಈಜಾಡುವ ಮರಿ ಹುಳುವಿನ ಅವಸ್ಥೆಗಳು ಕಾಣಬರುವುದಿಲ್ಲ.
(ಕೆ.ಎಂ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ